ಗುರುವಾರ, ಡಿಸೆಂಬರ್ 22, 2011

ಕೇಂದ್ರ ಸಾಹಿತ್ಯ ಅಕಾಡೆಮಿ 2011

1. ಕನ್ನಡದ ಕಥೆಗಾರ-ಕಾದಂಬರಿಕಾರ ಗೋಪಾಲಕೃಷ್ಣ ಪೈ ಮತ್ತು ಅವರ `ಸ್ವಪ್ನ ಸಾರಸ್ವತ` ಕಾದಂಬರಿ ಕೇಂದ್ರ ಸಾಹಿತ್ಯ ಅಕಾಡೆಮಿಯ 2011ನೇ ಸಾಲಿನ ಪ್ರಶಸ್ತಿಗೆ ಪಾತ್ರವಾಗಿದೆ.
2. ಪ್ರಶಸ್ತಿ 1 ಲಕ್ಷ ರೂಪಾಯಿ ನಗದು ಹಾಗೂ ಸ್ಮರಣಿಕೆ ಒಳಗೊಂಡಿದ್ದು, ಫೆ.14ರಂದು ದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
3. ಸಾವಿನ ನೆರಳಿನಲ್ಲೂ ತಮ್ಮ ಸ್ವಂತಿಕೆ ಉಳಿಸಿಕೊಳ್ಳಲು ಯತ್ನಿಸಿದ ಸಾರಸ್ವತ ಸಮುದಾಯದ ಕಥನವನ್ನು `ಸ್ವಪ್ನ ಸಾರಸ್ವತ` ಬೃಹತ್ ಕಾದಂಬರಿ ಒಳಗೊಂಡಿದೆ.
4. ಚರಿತ್ರೆ ಹಾಗೂ ಕಲ್ಪನೆ ಹದ ಪ್ರಮಾಣದಲ್ಲಿ ಮಿಳಿತವಾದ ಈ ಕೃತಿ ಗೋಪಾಲಕೃಷ್ಣ ಪೈ ಅವರ ಚೊಚ್ಚಿಲ ಕಾದಂಬರಿ. ಮೂರು ಕಥಾ ಸಂಕಲನ, ಒಂದು ಕಿರು ಕಾದಂಬರಿ ಪ್ರಕಟಿಸಿರುವ ಅವರು ಕೆಲವು ಚೀನೀ ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆ.
5. ಚಿತ್ರಕಥಾ ಲೇಖಕರಾಗಿಯೂ ಕೆಲಸ ಮಾಡಿರುವ ಪೈ, `ಕನಸೆಂಬೋ ಕುದುರೆಯನೇರಿ` ಚಿತ್ರದ ಚಿತ್ರಕಥೆ ರಚನೆಗಾಗಿ ಗಿರೀಶ ಕಾಸರವಳ್ಳಿ ಅವರೊಂದಿಗೆ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ.
6. 2009ರಲ್ಲಿ ಪ್ರಕಟಗೊಂಡ `ಸಪ್ನ ಸಾರಸ್ವತ` ಕಾದಂಬರಿ ಬೆಂಗಳೂರಿನ `ಭಾಗ್ಯಲಕ್ಷ್ಮಿ ಪ್ರಕಾಶನ`ದ ಪ್ರಕಟಣೆ.
7. ಭಾರತದ 23 ಭಾಷೆಗಳಲ್ಲಿ ರಚಿತವಾಗುವ ಶ್ರೇಷ್ಠ ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಲಾಗುತ್ತದೆ.
8. ಈ ಬಾರಿ ಪ್ರಶಸ್ತಿ ಪೈಪೋಟಿಯಲ್ಲಿ ಕನ್ನಡದ ಇತರ ಲೇಖಕರಾದ ಕೆ.ವಿ. ನಾರಾಯಣ, ಬರಗೂರು ರಾಮಚಂದ್ರಪ್ಪ, ಎಚ್.ಎಸ್. ಶಿವಪ್ರಕಾಶ್, ಹನೂರು ಕೃಷ್ಣಮೂರ್ತಿ ಮುಂತಾದವರ ಕೃತಿಗಳೂ ಇದ್ದುವೆಂದು ತಿಳಿದುಬಂದಿದೆ.
9. ಕನ್ನಡ ಕೃತಿಗಳಿಗೆ ಸಂಬಂಧಿಸಿದಂತೆ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಸಾಹಿತಿಗಳಾದ ವೀಣಾ ಶಾಂತೇಶ್ವರ, ಡಿ.ಎಸ್.ನಾಗಭೂಷಣ, ಬಂಜಗೆರೆ ಜಯಪ್ರಕಾಶ್ ಇದ್ದರು.
10. `ಪ್ರಜಾವಾಣಿ`ಯ ಅಂಕಣಕಾರ ರಾಮಚಂದ್ರ ಗುಹ ಸೇರಿದಂತೆ 22 ಲೇಖಕರು ಪ್ರಸಕ್ತ ಸಾಲಿನ ಹೆಮ್ಮೆಯ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.
11. ತಮ್ಮ ಕಥನ ಇತಿಹಾಸ `ಇಂಡಿಯಾ ಆಫ್ಟರ್ ಗಾಂಧಿ` ಕೃತಿಗಾಗಿ ಗುಹ ಅವರಿಗೆ ಈ ಪ್ರಶಸ್ತಿ ಸಂದಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ