1. ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಯಲ್ಲಿ `ನಿಗದಿತ ಕಾಲ ಮಿತಿಯಲ್ಲಿ ಸೇವೆಗಳನ್ನು ಪಡೆಯುವ ನಾಗರಿಕ ಹಕ್ಕು ಮತ್ತು ಕುಂದುಕೊರತೆ ನಿವಾರಣೆ 2001` ಮಸೂದೆ ಮಂಡಿಸಿದೆ.
2. ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಖಾತೆ ಸಚಿವ ವಿ. ನಾರಾಯಣ ಸ್ವಾಮಿ ಲೋಕಸಭೆಯಲ್ಲಿ ಈ ಮಸೂದೆ ಮಂಡಿಸಿದರು.
3. ನಿಗದಿತ ಅವಧಿಯಲ್ಲಿ ನಾಗರಿಕರಿಗೆ ನಿರ್ದಿಷ್ಟ ಕೆಲಸಗಳು ಪೂರ್ತಿಗೊಳ್ಳುವುದಕ್ಕೆ ಅಗತ್ಯ ವ್ಯವಸ್ಥೆ ಮಾಡುವ ಬಗ್ಗೆ ಮಸೂದೆಯಲ್ಲಿ ಅವಕಾಶ ನೀಡಲಾಗಿದೆ.
4. ಕಾಯ್ದೆ ಜಾರಿಯಾದ ಆರು ತಿಂಗಳ ಒಳಗಾಗಿ ಎಲ್ಲಾ ಸರ್ಕಾರಿ ಇಲಾಖೆಗಳು, ಸಂಸ್ಥೆಗಳು, ಸಂವಿಧಾನ ಬದ್ಧವಾಗಿ ರಚನೆಗೊಂಡ ಸಂಸ್ಥೆಗಳು, ಸಂಸತ್ತಿನ ಕಾಯ್ದೆಯ ಮೂಲಕ ಸ್ಥಾಪಿಸಲಾಗಿರುವ ನಿಗಮ, ಮಂಡಲಿ ಅಥವಾ ಕಂಪೆನಿಗಳು, ಸ್ಥಳೀಯಾಡಳಿತ ಸಂಸ್ಥೆಗಳು, ಸರ್ಕಾರದ ಅನುದಾನ ಪಡೆಯುತ್ತಿರುವ ಸಂಸ್ಥೆಗಳು ನಾಗರಿಕ ಸನ್ನದನ್ನು ಜಾಹೀರು ಪಡಿಸುವುದು ಕಡ್ಡಾಯ.
5. ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳು ಒದಗಿಸುವ ಸೇವೆ ಅಥವಾ ನೀಡುವ ಉತ್ಪಾದನೆಗಳ ಸಂಪೂರ್ಣ ವಿವರಗಳು ಹಾಗೂ ಅವುಗಳನ್ನು ನಾಗರಿಕರಿಗೆ ಒದಗಿಸಲು ಗರಿಷ್ಠ ಎಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ಸನ್ನದು ಒಳಗೊಂಡಿರಬೇಕು.
6. ನಿಗದಿತ ಕಾಲಾವಧಿಯಲ್ಲಿ ಒಮ್ಮೆ ಸೇವೆ ಒದಗಿಸಲಾಗದಿದ್ದರೆ ಯಾರಿಗೆ ಮೇಲ್ಮನವಿ ಸಲ್ಲಿಸಿ ಕುಂದುಕೊರತೆ ನಿವಾರಿಸಿಕೊಳ್ಳಬೇಕು ಎಂಬುದನ್ನು ಸ್ಪಷ್ಟವಾಗಿ ನಮೂದಿಸುವುದನ್ನು ಮಸೂದೆಯಲ್ಲಿ ಕಡ್ಡಾಯಗೊಳಿಸಲಾಗಿದೆ.
7. ಕಾನೂನು ಜಾರಿಗೆ ಬಂದ ಆರು ತಿಂಗಳ ಒಳಗಾಗಿ ಪಂಚಾಯಿತಿ ಮಟ್ಟದಿಂದ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಕುಂದುಕೊರತೆ ನಿವಾರಣಾ ಘಟಕ ಸ್ಥಾಪಿಸುವುದು ಹಾಗೂ ದೂರು ಬಂದ ಎರಡು ದಿನಗಳಲ್ಲಿ ಸ್ವೀಕೃತಿ ಪ್ರತಿ ಒದಗಿಸುವುದು ಕಡ್ಡಾಯ.
8. ದೂರು ಬಂದ 30 ದಿನಗಳ ಒಳಗೆ ಕುಂದುಕೊರತೆ ನಿವಾರಿಸಿ ತಪ್ಪಿತಸ್ಥ ಅಧಿಕಾರಿ ಯಾರು ಎಂದು ಪತ್ತೆ ಹಚ್ಚುವುದು ಕಡ್ಡಾಯ.
9. ಯಾವುದೇ ಸಿಬ್ಬಂದಿ ಅಥವಾ ಅಧಿಕಾರಿಯಿಂದ ಲೋಪ ಅಥವಾ ನಿರ್ಲಕ್ಷ್ಯ ಉಂಟಾಗಿದ್ದರೆ ಅಂಥವರ ವಿರುದ್ಧ ಇಲಾಖೆ ಕ್ರಮ ಜರುಗಿಸುವಂತೆ ನೋಡಿಕೊಳ್ಳುವುದು ಕುಂದುಕೊರತೆ ನಿವಾರಣಾ ಅಧಿಕಾರಿಯ ಜವಾಬ್ದಾರಿಯಾಗಿರುತ್ತದೆ.
10. ಯಾವುದೇ ಸರ್ಕಾರಿ ನೌಕರ ಉದ್ದೇಶಪೂರ್ವಕವಾಗಿ ತಪ್ಪೆಸಗಿದರೆ ಆ ನೌಕರನ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕಾರ ಕ್ರಮ ತೆಗೆದುಕೊಳ್ಳುವಂತೆ ಕುಂದುಕೊರತೆ ನಿವಾರಣಾ ಅಧಿಕಾರಿ ಸಂಬಂಧಪಟ್ಟ ಉನ್ನತ ಅಧಿಕಾರಿಗೆ ಶಿಫಾರಸು ಮಾಡಬೇಕು ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.
11. ತಪ್ಪಿತಸ್ಥ ಅಧಿಕಾರಿ, ಸಿಬ್ಬಂದಿ ವಿರುದ್ಧ ತೆಗೆದುಕೊಂಡಿರುವ ಕ್ರಮಗಳ ವಿವರಗಳನ್ನು ದೂರುದಾರರಿಗೆ ತಿಳಿಸುವುದು ಕುಂದು ಕೊರತೆ ನಿವಾರಣೆ ಅಧಿಕಾರಿಯ ಕರ್ತವ್ಯ.
12. 30 ದಿನಗಳಲ್ಲಿ ದೂರುದಾರರ ಸಮಸ್ಯೆ ಇತ್ಯರ್ಥ ಮಾಡಲಾಗದಿದ್ದರೆ ಅಂತಹ ದೂರುಗಳನ್ನು ಮೇಲ್ಮನವಿ ಪ್ರಾಧಿಕಾರಕ್ಕೆ ಕಳುಹಿಸಬೇಕು ಎಂದು ಮಸೂದೆಯಲ್ಲಿ ಸ್ಪಷ್ಟಪಡಿಸಲಾಗಿದೆ.
13. ಒಮ್ಮೆ ಕುಂದುಕೊರತೆ ನಿವಾರಣಾ ಅಧಿಕಾರಿ ಸಮಸ್ಯೆ ಬಗೆಹರಿಸಲು ತೆಗೆದುಕೊಂಡ ಕ್ರಮ ತೃಪ್ತಿಕರವಾಗಿರದಿದ್ದರೆ ದೂರುದಾರರು ಮೇಲ್ಮನವಿ ಸಲ್ಲಿಸಬಹುದಾಗಿದ್ದು, ಮೇಲ್ಮನವಿ ಪ್ರಾಧಿಕಾರವು 30 ದಿನಗಳ ಒಳಗಾಗಿ ತೀರ್ಮಾನ ಪ್ರಕಟಿಸಬೇಕಾಗುತ್ತದೆ.
14. ರಾಜ್ಯ ಸರ್ಕಾರದ ವ್ಯಾಪ್ತಿಯ ದೂರಾದರೆ ರಾಜ್ಯ ಸಾರ್ವಜನಿಕ ಕುಂದುಕೊರತೆ ಪರಿಹಾರ ಆಯೋಗಕ್ಕೆ ಮತ್ತು ಕೇಂದ್ರ ಸರ್ಕಾರದ ವ್ಯಾಪ್ತಿಯ ದೂರಾದರೆ ಕೇಂದ್ರ ಸಾರ್ವಜನಿಕ ಕುಂದುಕೊರತೆ ಪರಿಹಾರ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ.
15. ರಾಜ್ಯ ಮತ್ತು ಕೇಂದ್ರ ಆಯೋಗದಲ್ಲಿ ಮುಖ್ಯ ಆಯುಕ್ತರು ಮತ್ತು ಗರಿಷ್ಠ 10 ಮಂದಿ ಆಯುಕ್ತರು ಇರುತ್ತಾರೆ. ರಾಜ್ಯದಲ್ಲಿ ಆಯುಕ್ತರನ್ನು ರಾಜ್ಯಪಾಲರು ಮತ್ತು ಕೇಂದ್ರದ ಆಯುಕ್ತರನ್ನು ರಾಷ್ಟ್ರಪತಿ ನೇಮಕ ಮಾಡುತ್ತಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ